ಕಳೆದ ಶೈಕ್ಷಣಿಕ ವರ್ಷ 2015-16ನೇ ಸಾಲಿನಲ್ಲಿ ವಿದ್ಯಾರ್ಥಿವೇತನ ವ್ಯವಸ್ಥೆಯನ್ನು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್ ಮೂಲಕ ಏಕರೂಪಗೊಳಿಸಿದ ಕೇಂದ್ರ ಸರ್ಕಾರ ಒಬ್ಬ ವಿದ್ಯಾರ್ಥಿಗೆ ತನ್ನ ಅರ್ಹತೆಗನುಗುಣವಾಗಿ ಲಭ್ಯವಿರುವ ಎಲ್ಲಾ ಸ್ಕಾಲರ್‍ಷಿಪ್‍ಗಳಿಗೆ ಒಂದೇ ನೋಂದಣಿಯೊಂದಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಿಕೊಟ್ಟಿತ್ತು. ಆದರೆ ಈ ವ್ಯವಸ್ಥೆಯು ಇಲಾಖಾ ಮಟ್ಟದಲ್ಲಿ ಹಲವಾರು ಗೊಂದಲ-ಎಡವಟ್ಟುಗಳನ್ನು ಸೃಷ್ಟಿಸಿದ್ದು, ಬಹುತೇಕ ಹೆಚ್ಚಿನ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳಿಂದ ವಂಚಿತರಾಗಿದ್ದರು. ಈ ಬಾರಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಇದೇ ವ್ಯವಸ್ಥೆಗೆ ಸುಧಾರಣೆ ಮಾಡಿ ಒಂದು ವಿದ್ಯಾರ್ಥಿಗೆ ಯಾವುದಾದರೂ ಒಂದು ಮಾತ್ರ ಸ್ಕಾಲರ್‍ಷಿಪ್‍ಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳಲ್ಲಿನ ಮತ್ತು ಇಲಾಖೆಗಳಲ್ಲಿನ ಗೊಂದಲಗಳು ಪರಿಹಾರಗೊಳ್ಳಬಹುದೆಂದು ನಿರೀಕ್ಷಿಸಲಾಗಿದ್ದರೂ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗಬಹುದೇ ಎಂಬ ಆತಂಕ ಎದುರಾಗಿದೆ.

ಗೊಂದಲಕ್ಕೊಳಗಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ತಡವಾಗಿಯೇ ಪ್ರಾರಂಭಗೊಂಡ ಅಲ್ಪ ಸಂಖ್ಯಾತರ ಪ್ರಿಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್, ಮೆರಿಟ್ ಕಂ ಮೀನ್ಸ್ ಸ್ಕಾಲರ್‍ಷಿಪ್‍ಗಳ ಅರ್ಜಿ ಪ್ರಕ್ರಿಯೆಯು ವಿದ್ಯಾರ್ಥಿಗಳಲ್ಲಿ ಕೆಲವೊಂದು ಗೊಂದಲಗಳನ್ನು ಮೂಡಿಸಿದ್ದಂತೂ ನಿಜ. ಆರಂಭದಲ್ಲಿ ಒದಗಿಸಲಾದ ಅಧಿಸೂಚನೆಯಲ್ಲಿ, ವಿದ್ಯಾರ್ಥಿಯು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿ, ಅರ್ಜಿಯ ಪ್ರತಿಯನ್ನು ದಾಖಲಾತಿಗಳೊಂದಿಗೆ ಜಿಲ್ಲಾ ಕಲ್ಯಾಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುವಂತೆ ಅಲ್ಪ ಸಂಖ್ಯಾತ ಇಲಾಖೆಯು ಸೂಚಿಸಿತ್ತು. ಆದರೆ ಕೆಲವು ದಿನಗಳ ನಂತರ ಅದರ ಪ್ರತಿಯನ್ನು ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾ ಸಂಸ್ಥೆಗೆ ನೀಡುವಂತೆ ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್ ನಲ್ಲಿ ಸೂಚಿಸಲಾಗಿತ್ತು. ಆದರೆ ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಅಧಿಕೃತ ಮಾಹಿತಿಯ ರವಾನೆಯಾಗಿರಲಿಲ್ಲ. ಈ ಮಧ್ಯೆ ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಜಿಲ್ಲಾ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಗಳನ್ನು ತಲುಪಿಸಿದ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂಬ ಗೊಂದಲ!

ಇನ್ನೂ ಸಿಗದ ಲಾಗಿನ್!
ಅಲ್ಪ ಸಂಖ್ಯಾತರ ಪ್ರಿಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್, ಎಸ್‍ಟಿ ಪ್ರಿಮೆಟ್ರಿಕ್ ಹಾಗೂ ಪೋಸ್ಟ್ ಮೆಟ್ರಿಕ್, ಬೀಡಿ ಸ್ಕಾಲರ್‍ಷಿಪ್, ಎಂಹೆಚ್‍ಆರ್‍ಡಿಯ ಸೆಂಟ್ರಲ್ ಸೆಕ್ಟರ್ ಸ್ಕೀಂ ಸ್ಕಾಲರ್‍ಷಿಪ್‍ಗಳ ಅರ್ಜಿ ಸಲ್ಲಿಕೆಯು ಬಹುತೇಕ ಕೊನೆಗೊಳ್ಳುತ್ತಿದ್ದರೂ ಕೆಲವಾರು ವಿದ್ಯಾಸಂಸ್ಥೆಗಳಿಗೆ ತಮ್ಮ ವಿದ್ಯಾರ್ಥಿಗಳು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಹಂತಕ್ಕೆ ಕಳುಹಿಸಿಕೊಡಲು ಲಾಗಿನ್‍ಗಳನ್ನೇ ನೀಡಲಾಗಿಲ್ಲ. ಲಾಗಿನ್ ನೀಡಲಾಗಿರುವ ಶಿಕ್ಷಣ ಸಂಸ್ಥೆಗಳಿಗೂ ಏನು ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನಗಳನ್ನು ಯಾವ ಇಲಾಖೆಯೂ ಈವರೆಗೆ ಒದಗಿಸಿಲ್ಲ. ಯಾವುದೇ ಇಲಾಖೆಯ ಸ್ಪಷ್ಟ ಮಾರ್ಗದರ್ಶನಗಳನ್ನು ಮತ್ತು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ಗೆ ಲಾಗಿನ್ ಪಡೆಯದ ಶಿಕ್ಷಣ ಸಂಸ್ಥೆಗಳು ಯಾವುದೇ ಅರ್ಜಿಗಳನ್ನು ಪರಿಶೀಲನೆ ಮಾಡುವ ಗೋಜಿಗೇ ಹೋಗಿಲ್ಲ!

ಏತನ್ಮದ್ಯೆ, ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಕೆಲವು ಕಾಲೇಜುಗಳ ಹೆಸರುಗಳು ಒಂದಕ್ಕಿಂತ ಹೆಚ್ಚು ಬಾರಿ ಒಂದೇ ಹೆಸರಿನಲ್ಲಿ ಲಿಸ್ಟ್ ಆಗಿರುವುದರಿಂದ ವಿದ್ಯಾರ್ಥಿಗಳಿಗೂ ಯಾವ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ. ಹೀಗೆ ಒಂದಕ್ಕಿಂತ ಹೆಚ್ಚು ಬಾರಿ ಲಿಸ್ಟ್ ಆಗಿರುವ ಕಾಲೇಜುಗಳಿಗೆ ಒಂದು ಅಕೌಂಟ್‍ಗೆ ಮಾತ್ರ ಲಾಗಿನ್ ನೀಡಲಾಗಿದ್ದು, ಉಳಿದ ಹೆಸರುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳ ಅರ್ಜಿಗಳು ಪರಿಶೀಲನೆಯೇ ಆಗದೆ ಅನಾಥವಾಗಲಿದೆ.

ಸಹಾಯಕ್ಕಿಲ್ಲದ ಹೆಲ್ಪ್‍ಲೈನ್!
ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ನೀಡಲಾಗಿರುವ ಹೆಲ್ಪ್‍ಡೆಸ್ಕ್ ಸಂಖ್ಯೆ 0120-6619540ಗೆ ಕರೆ ಮಾಡಿ ಯಾವುದೇ ಸಹಾಯವನ್ನು ಅಪೇಕ್ಷಿಸಿದಾಗ ‘ನಿಮ್ಮ ಜಿಲ್ಲೆ/ರಾಜ್ಯಗಳ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆಯೂ, ನೋಡಲ್ ಅಧಿಕಾರಿಗಳ ಸಂಪರ್ಕ ವಿವರಗಳನ್ನು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿಯೇ ನೀಡಲಾಗಿದೆ’ ಎಂದೂ ತಿಳಿಸಿ, ನುಣ್ಣಗೆ ಜಾರಿಕೊಳ್ಳುತ್ತಾರೆ. ಹೋಗಲೀ, ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನಾದರೂ ಸಂಪರ್ಕಿಸೋಣವೆಂದರೆ, ಕರೆ ಸ್ವೀಕರಿಸಿದ ವ್ಯಕ್ತಿಗಳು, ‘ನಾನು ಆ ಇಲಾಖೆಯಿಂದ ವರ್ಗಾವಣೆಗೊಂಡು ತುಂಬಾ ಸಮಯವಾಗಿದೆ, ನನ್ನಲ್ಲಿ ಯಾವ ಮಾಹಿತಿಯೂ ಇಲ್ಲ’; ‘ನಾನು ಆ ಇಲಾಖೆಗೆ ಸಂಬಂಧಿಸಿದವನಲ್ಲ, ನನ್ನ ದೂರವಾಣಿ ದೋಷದಿಂದ ಅದರಲ್ಲಿ ಸೇರಿಕೊಂಡಿದೆ’ ಎಂಬಂತಹ ಉತ್ತರಗಳೇ ದೊರೆಯುತ್ತವೆ. ಕಾಟಾಚಾರಕ್ಕೆಂಬಂತೆ ನೋಡಲ್ ಅಧಿಕಾರಿಗಳ ಹೆಸರುಗಳನ್ನು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಒದಗಿಸಲಾಗಿದೆ.

ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯವಲ್ಲ ಆದರೆ ಮೊಬೈಲ್ ಕಡ್ಡಾಯ!
ಆರಂಭದಲ್ಲಿ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದ್ದ ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್, ನಂತರ ನಿಯಮವನ್ನು ಸಡಿಲಿಸಿ ಆಧಾರ್ ಕಾರ್ಡ್ ಹೊಂದಿರದ ವಿದ್ಯಾರ್ಥಿಗಳಿಗೂ ಆಧಾರ್ ನೋಂದಣಿ ಸಂಖ್ಯೆ ಅಥವಾ ಬ್ಯಾಂಕು ಖಾತೆಯ ವಿವರ ನೀಡಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿತ್ತು. ಇದರ ಜತೆಗೇ ಪ್ರತೀ ವಿದ್ಯಾರ್ಥಿಯೂ ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಅರ್ಜಿ ನೋಂದಾಯಿಸಲು ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಿತು. ಈ ಕ್ರಮದಿಂದಾಗಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೊಬೈಲ್ ಬಳಕೆ ನಿಷಿದ್ಧವಾಗಿರುವುದರಿಂದ, ವಿದ್ಯಾರ್ಥಿಗಳ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಸೈಬರ್ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಸ್ಕಾಲರ್‍ಷಿಪ್ ಅರ್ಜಿಯೊಂದಿಗೆ ದೃಢೀಕರಿಸಿದ ದಾಖಲಾತಿಗಳನ್ನು ಒದಗಿಸಿದರೂ ಮೊಬೈಲ್ ವೆರಿಫಿಕೇಶನ್ ವ್ಯವಸ್ಥೆಯು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನ ಅವ್ಯವಸ್ಥೆಯನ್ನು ತೋರಿಸುವ ಕೈಗನ್ನಡಿ.

ಆಧಾರವಾಗಿ ನಿಲ್ಲದ ಆಧಾರ್!
ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಅರ್ಜಿ ಸಲ್ಲಿಸಿದ ಬಹುತೇಕ ಶೇ.80 ವಿದ್ಯಾರ್ಥಿಗಳಿಗೆ ‘ಅರ್ಜಿಯಲ್ಲಿ ನೀಡಿರುವ ಹೆಸರು ಆಧಾರ್‍ನಲ್ಲಿರುª ಹೆಸರಿನ ಜೊತೆ ಹೊಂದಾಣಿಕೆ ಮಾಡಲಾಗುತ್ತಿಲ್ಲ. ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ಗೆ ಮತ್ತೆ ಲಾಗಿನ್ ಆಗಿ ನಿಮ್ಮ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಿ’ ಎಂಬುದಾಗಿ ಎಸ್‍ಎಂಎಸ್ ಅನ್ನು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಿಂದ ಕಳುಹಿಸಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆಂತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯಲ್ಲಿದ್ದಂತೆ ಹೆಸರನ್ನು ಅರ್ಜಿಯಲ್ಲಿ ನಮೂದಿಸಿದ ವಿದ್ಯಾರ್ಥಿಗಳಿಗೆ ಎಸ್‍ಎಂಎಸ್ ಹೊರತುಪಡಿಸಿ, ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಾಗಲೀ ಅಥವಾ ಯಾವುದೇ ಇಲಾಖೆಗಳ ವೆಬ್‍ಸೈಟ್‍ಗಳಲ್ಲಾಗಲೀ ಅಧಿಕೃತ ಮಾಹಿತಿ ಯಾ ಮಾರ್ಗದರ್ಶನಗಳನ್ನು ನೀಡದೇ ಇರುವುದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಶಿಕ್ಷಣ ಸಂಸ್ಥೆಗಳಿಂದ ನಮಗೆ ಬರುವ ಬಹುತೇಕ ಕರೆಗಳು ಸ್ಕಾಲರ್‍ಷಿಪ್ ಅರ್ಜಿಗಳನ್ನು ಹೇಗೆ ಪರಿಶೀಲನೆ ಮಾಡಬೇಕು, ಪರಿಶೀಲನೆ ಮಾಡಿದ ನಂತರ ಅರ್ಜಿಗಳನ್ನು ಏನು ಮಾಡಬೇಕು, ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸುವುದು ಹೇಗೆ ಮುಂತಾದವುಗಳೇ ಆಗಿರುತ್ತಿದ್ದವು. ಬೇಸರದ ವಿಚಾರ ಅಂದರೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಪರಿಶೀಲನೆ ಮಾಡಲು ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನ ಲಾಗಿನ್ ನೀಡದೇ ಇರುವುದರಿಂದ ವಿದ್ಯಾರ್ಥಿಗಳ ಅರ್ಜಿಗಳು ಶಿಕ್ಷಣ ಸಂಸ್ಥೆಗಳ ಹಂತದಲ್ಲಿಯೇ ಉಳಿದುಬಿಡಲಿದ್ದು, ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನದಿಂದ ವಂಚಿತರಾಗಲಿದ್ದಾರೆ.

ಶರತ್ ಆಳ್ವ ಕರಿಂಕ
ಮುಖ್ಯಸ್ಥರು, ಕ್ರಸ್ಟ್ ಸೆಂಟರ್ ಫಾರ್ ರಿಸಚ್ & ಡೆವಲಪ್‍ಮೆಂಟ್, ಪುತ್ತೂರು

ಶಿಕ್ಷಣ ಸಂಸ್ಥೆಗಳಿಗೆ ಉಚಿತವಾಗಿ ಮಾಹಿತಿ ನೀಡುತ್ತಿರುವ ಪುತ್ತೂರಿನ ಕ್ರಸ್ಟ್ ಸಂಸ್ಥೆ
ಕಳೆದ ಸುಮಾರು ಐದು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ಅರ್ಜಿ ಸಲ್ಲಿಸಲು ಸಹಕರಿಸುತ್ತಿರುವ ಪುತ್ತೂರಿನ ಕ್ರಸ್ಟ್ ಸಂಸ್ಥೆಯು ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕಾಲೇಜುಗಳಿಗೆ ನ್ಯಾಶನಲ್ ಸ್ಕಾಲರ್‍ಷಿಪ್ ಪೋರ್ಟಲ್‍ನಲ್ಲಿ ಕೋರ್ಸುಗಳನ್ನು ಸೇರಿಸಲು, ಅರ್ಜಿಗಳನ್ನು ಪರಿಶೀಲಿಸಲು ಮತ್ತು ಅಗತ್ಯವಿರುವ ತಾಂತ್ರಿಕ ಸೇವೆಗಳನ್ನು ಉಚಿತವಾಗಿ ಮಾಡಿ ಕೊಟ್ಟಿತ್ತು. ಇಲಾಖೆಗಳಿಂದ ಯಾವುದೇ ಸಮರ್ಪಕ ಮಾಹಿತಿಗಳನ್ನು ಪಡೆಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು. ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯ ತಾಲೂಕುಗಳ ಸುಮಾರು 15ಕ್ಕಿಂತಲೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಂಡವು.