ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿವಿಧ ಯೋಜನೆಗಳಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಸಿಗುವ ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಿಗುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನ, ಬೀಡಿ ಕಾರ್ಮಿಕರ ಮಕ್ಕಳಿಗೆ ಸಿಗುವ ವಿದ್ಯಾರ್ಥಿವೇತನ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸಿಗುವ ಎಂಹೆಚ್‍ಆರ್‍ಡಿ ವಿದ್ಯಾರ್ಥಿವೇತನ ಬಯಸಿ 2015-16ನೇ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಸಲ್ಲಿದ ಬಹುತೇಕ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಾರದೇ ಗೊಂದಲ ಮತ್ತು ನಿರಾಶೆ ಮೂಡಿಸಿದೆ.
ಏನು ಕಾರಣ? : ಕಳೆದ 2015-16ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನದ ಅಧೀನದಲ್ಲಿರುವ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ರೂಪಿಗೊಳಿಸಿದ ಏಕಗವಾಕ್ಷಿ ನ್ಯಾಷನಲ್ ಸ್ಕಾಲರ್‍ಷಿಪ್ ಪೋರ್ಟಲ್ ಮುಖಾಂತರ ಈ ಮೇಲಿನ ಎಲ್ಲಾ ವಿದ್ಯಾರ್ಥಿವೇತನ ಪಡೆಯಲು ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸುವಂತೆ ಆದೇಶಿಸಲಾಗಿತ್ತು.
ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಕೆಲವು ಅಗತ್ಯ ಸೂಚನೆಗಳನ್ನೂ ಇಲಾಖೆಯು ವಿದ್ಯಾರ್ಥಿಗಳಿಗೆ ಒದಗಿಸಿತ್ತು:

  1. ನ್ಯಾಷನಲ್ ಸ್ಕಾಲರ್‍ಷಿಪ್ ಪೋರ್ಟಲ್ – ಎಲ್ಲಾ ವಿದ್ಯಾರ್ಥಿವೇತನಗಳಿಗೆ ಒಂದು ಸಾಮಾನ್ಯ ಅಪ್ಲಿಕೇಶನ್ ಮಾದರಿ.
  2. ಈ ಪೋರ್ಟಲ್‍ನಲ್ಲಿ ಒಬ್ಬ ವಿದ್ಯಾರ್ಥಿ/ನಿಯು ಒಂದು ಬಾರಿ ಮಾತ್ರ ಆನ್‍ಲೈನ್ ಮುಖಾಂತರ ತಮ್ಮ ಸವಿವರಗಳನ್ನು ಒದಗಿಸಿ ನೋಂದಾಯಿಸಿಕೊಳ್ಳಬೇಕು.
  3. ನೋಂದಾಯಿಸಿಕೊಂಡ ವಿದ್ಯಾರ್ಥಿ/ನಿಯು ತನ್ನ ಅರ್ಹತೆಗೆ ಸರಿಯಾಗಿ ಲಭ್ಯವಿರುವ ಎಲ್ಲಾ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಇದೇ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು.
  4. ಒಂದುವೇಳೆ ಒಬ್ಬ ವಿದ್ಯಾರ್ಥಿ/ನಿಯು ಒಂದು ಇಲಾಖೆಯಿಂದ ದೊರೆಯುವ ವಿದ್ಯಾರ್ಥಿವೇತನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಿದ್ದರೆ, ಅಂತಹ ನಕಲಿ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಇಲಾಖೆಗೆ ನೀಡಿತ್ತು.
  5. ಮಂಜೂರಾತಿ ಸಂದರ್ಭದಲ್ಲಿ ವಿದ್ಯಾರ್ಥಿ/ನಿಯು ತನಗೆ ಮಂಜೂರಾದ ವಿದ್ಯಾರ್ಥಿವೇತನಗಳಲ್ಲಿ ಸೂಕ್ತವಾದ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ.

ಈ ಮೇಲಿನ ಎಲ್ಲಾ ಸೂಚನೆಗಳನ್ನು ಕ್ರಮಬದ್ಧವಾಗಿ ಪಾಲಿಸಿ, ಒಂದಕ್ಕಿಂತ ಹೆಚ್ಚು ಇಲಾಖೆಗಳಲ್ಲಿನ ವಿದ್ಯಾರ್ಥಿವೇತನ ಬಯಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಲಾಖೆಗಳು ಮಾಡಿರುವ ಅವಸರದ ಎಡವಟ್ಟು ಪೀಕಲಾಟ ತಂದಿಟ್ಟಿದೆ. ಉದಾಹರಣೆಗೆ ಬೀಡಿ ಕಾರ್ಮಿಕರ ಮಕ್ಕಳು ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳನ್ನು ಪಡೆದಿದ್ದಾಗ, ಅಂತಹ ವಿದ್ಯಾರ್ಥಿಯು ಬೀಡಿ ಸ್ಕಾಲರ್‍ಷಿಪ್ ಮಾತ್ರವಲ್ಲದೇ ಎಂಹೆಚ್‍ಆರ್‍ಡಿ ಸ್ಕಾಲರ್‍ಷಿಪ್‍ಗೂ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಯು ಎರಡೂ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದರೆ, “ಒಂದಕ್ಕಿಂತ ಹೆಚ್ಚಿನ ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಿದ್ದೀರಿ” ಎಂಬ ಕಾರಣ ನೀಡಿ ಬೀಡಿ ಸ್ಕಾಲರ್‍ಷಿಪ್‍ಗೆ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲನಾ ಹಂತದಲ್ಲಿಯೇ ರಾಜ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ತಿರಸ್ಕೃತಗೊಳಿಸಲಾಗಿದೆ. ಆದರೆ ಇನ್ನೊಂದು ಅರ್ಜಿ, ಅಂದರೆ ಎಂಹೆಚ್‍ಆರ್‍ಡಿ ಸ್ಕಾಲರ್‍ಷಿಪ್‍ಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯು ಇನ್ನೂ ಮೆರಿಟ್ ಲಿಸ್ಟ್/ಆಯ್ಕೆ ಪಟ್ಟಿಗೆ ಬರುವ ಮುನ್ನವೇ ಬೀಡಿ ಸ್ಕಾಲರ್‍ಷಿಪ್ ಅರ್ಜಿಯನ್ನು ತಿರಸ್ಕೃತಗೊಳಿಸಿರುವುದರಿಂದ, ಎಂಹೆಚ್‍ಆರ್‍ಡಿ ಸ್ಕಾಲರ್‍ಷಿಪ್ ಮಂಜೂರು ಆಗದಿದ್ದರೆ, ಅಂತಹ ವಿದ್ಯಾರ್ಥಿಯು ಆ ಎರಡೂ ವಿದ್ಯಾರ್ಥಿವೇತನಗಳಿಂದ ವಂಚಿತನಾಗುತ್ತಾನೆ.
ವಿಪರ್ಯಾಸವೆಂದರೆ, ಇಂತಹ ಎಡವಟ್ಟುಗಳಿಂದಾಗಿ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗೆ ಸಿಗಬೇಕಾದ ಸವಲತ್ತು ಕೈತಪ್ಪಿ, ತನಗಿಂತಲೂ ಕಡಿಮೆ ಅಂಕ ಗಳಿಸಿದ ಇನ್ನೋರ್ವ ವಿದ್ಯಾರ್ಥಿಗೆ ಇದರ ಲಾಭ ಸಿಗುತ್ತಿದೆ. ಏತನ್ಮದ್ಯೆ, ಇಂತಹ ಲೋಪದೋಷಗಳಿಂದ ತೊಂದರೆಗೊಳಗಾದ ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ಪರಿಹಾರಕ್ಕಾಗಿ ಯಾವ ಸಂಪರ್ಕಾಧಿಕಾರಿಯನ್ನು ಸಂಪರ್ಕಿಸಬಹುದು ಎಂಬ ಕನಿಷ್ಟ ಮಾಹಿತಿಯನ್ನೂ ನೀಡಲಾಗಿಲ್ಲ.

ಪರಿಶೀಲನಾ ಹಂತದಲ್ಲಿಯೇ “ಒಂದಕ್ಕಿಂತ ಹೆಚ್ಚು ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಿದ್ದೀರಿ” ಎಂದು ಹೇಳಿ ಅರ್ಜಿಯನ್ನು ತಿರಸ್ಕೃತಗೊಳಿಸುವ ಇಲಾಖೆಯು, ಒಂದು ವಿದ್ಯಾರ್ಥಿಗೆ ಒಂದಕ್ಕಿಂತ ಹೆಚ್ಚು ಇಲಾಖೆಗಳಲ್ಲಿನ ಅರ್ಹ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿದ್ದಾದರೂ ಯಾವ ಕಾರಣಕ್ಕೆ? ಕನಿಷ್ಟ ಪಕ್ಷ ವಿದ್ಯಾರ್ಥಿಯು ಸಲ್ಲಿಸಿದ ಯಾವುದಾದರೂ ಒಂದು ಅರ್ಜಿಯ ಸ್ಥಿತಿಯು ಅರ್ಹತಾ ಪಟ್ಟಿ ಸಿದ್ಧಗೊಳ್ಳುವವರೆಗಾದರೂ ಕಾದು, ಅದು ಮೆರಿಟ್ ಲಿಸ್ಟ್‍ನಲ್ಲಿ ಬಂದರೆ ಮಾತ್ರ ಇತರೇ ಅರ್ಜಿಗಳನ್ನು ತಿರಸ್ಕøತಗೊಳಿಸುವ ಕ್ರಮ ಕೈಗೊಳ್ಳಬಹುದಿತ್ತು. ರಾಜ್ಯ ಸರ್ಕಾರವು ಕೂಡಲೇ ಆಗಿರುವ ಲೋಪದೋಷಗಳನ್ನು ಪರಿಶೀಲಿಸಿ ವಿದ್ಯಾರ್ಥಿವೇತನ ವಂಚಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯವನ್ನು ಒದಗಿಸಿಕೊಡಲು ಮುಂದಾಗಬೇಕು.

ಶರತ್ ಆಳ್ವ ಕರಿಂಕ
ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್‍ಮೆಂಟ್, ಪುತ್ತೂರು